Wednesday, April 25, 2012

ಬಾಲೆ ನೀನ್ಯಾರು?

ನನ್ನೆದೆಯ ಗುಡಿಯಲ್ಲಿ
ಕಟ್ಟಿರುವ ಮನೆಯಲ್ಲಿ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

ಆಸೆಗಳು ಒಡಲಲ್ಲಿ ಕುಡುಗೋಲ ಕುಟ್ಟಿಹುದು
ಕಡೆವ ಮನಸಿನಲಿ ಬಯಲಾಟವಾಡಿಹುದು
ಮಿಡಿವ ಭಾವಗಳ ಅತ್ತಿತ್ತ ನೂಕುತಲಿ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

ಒಳಗೊಳಗೆ ಕೊರಗುತ್ತ ಕಳವಳದಿ ನೋಡಿದೆನು
ಕೈಗೆಟುಕದಂತೆ ನಿಂತಿರಲು ನೀ
ಒಳಗಿರುವ ಕಲರವದ ಕೂಗು ಕೇಳಿದರೂ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

                       - ಮೇಘನಾ

Tuesday, April 24, 2012

ನನ್ನ ಕಣ್ಣೀರಲ್ಲೇ ಬರೆದಿರುವೆ ಈ ಓಲೆಯಾ
ದಯಮಾಡಿ ಹರಿಯದಿರು ಇದ ನೀ ಗೆಳೆಯಾ
ನಿನಗಾಗಿ ಮರುಗಿ ಮಲಗಿದೆ ಹೃದಯಾ
ಕೇಳಲಾರೆಯಾ ನೀ ಮನದಾ ಕರೆಯಾ||

ನಿದ್ದೆಯಲೂ ಕಾಡುತಿದೆ ನಿನ್ನದೇ ಕನಸುಗಳು
ಬೆರಳುಗಳ ಬೆಸೆಯುತಿದೆ ಪ್ರೀತಿಯಾ ಭಾವಗಳು
ಗುದ್ದಾಡಿ ಓಡಿಸವು ಅದ ಹೃದಯದಾ ಆಸೆಗಳು
ಪೆದ್ದಾಗಿ ಮಲಗಿರುವೆ ದುಃಖದಾ ಎದುರು||

ಮನದೊಡನೆ ಮಾತನಾಡುತಿದೆ ನಿನ್ನ ಉಸಿರು
ಬಚ್ಚಿಡಲಾರದೆ ನೀ ಸುಳಿದಾ ಗುರುತು,
ಬಿಚ್ಚಿಡು ಮೌನವೇಕೇ ಇನ್ನು ನನ್ನಾ ಎದುರು






Friday, April 20, 2012

ಓ ಜನನೀ....


ಜಗದೊಳಗೆ ನನ್ನ ದೂಡಿರುವ ದೇವತೇ ನೀನು
ನಿನ್ನೊಳಗೇ ನನ್ನ ಸೃಷ್ಟಿಸಿ ಪೋಷಿಸಿದೇ ನೀನು
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

ನರನಾಡಿ ನೆತ್ತರುಗಳನೇ
ನನಗೇ ಉಣಿಸಿದೆ
ನಿನ್ನ ಹೃದಯದ ಬಡಿತದಲೇ
ನನ್ನ ಹೃದಯವ ಚಿತ್ರಿಸಿದೆ
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

ಕೈ ಹಿಡಿದು ನೀ ಮುನ್ನಡೆದು
ಭುವಿ ಒಡಲಾ ಸ್ಪರ್ಷಿಸಿದೆ
ಕಣ್ತೆರೆಸಿ ನನ್ನ ತಬ್ಬಿಡಿದು
ರವಿ ಕಿರಣಗಳ ಸೋಕಿಸಿದೆ
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

                

Tuesday, April 17, 2012

ಅಪಾರ...


ಇರುವೆ ಚಿಕ್ಕ ಜೀವಿಯಾದರೂ
ಕಡಿದಾಗ ಆಗುವ ಉರಿ ಅಪಾರ
ಹಾಗೆಯೇ ಕಷ್ಟಗಳೂ, ಬರುವಾಗ
ಅಲ್ಪ ಪ್ರಮಾಣದಲ್ಲಿದ್ದರೂ,
ಕೊಡುವ ಯಾತನೆ ಅಪಾರ..

ನೆನಪು..


ಕಹಿ ನೆನಪುಗಳು ಎಂಬ ಕಸವ
ಗುಡಿಸಿ ಬುಟ್ಟಿಗೆಸೆದೆ,
ಏನಾದರೂ ಬೆಂಬಿಡೆನು ಎಂಬ
ಛಲ ತೊಟ್ಟ ನೆನಪು,
ದಾರಿಯ ಅಂಚಿನಲಿ ಕೊಟ್ಟ ಬೆಂಕಿಯ
ಕೈಗೆ ಸಿಕ್ಕಿ, ಉರಿದು, ಹೊಗೆಯಾಗಿ
ಮತ್ತೆ ನನ್ನನ್ನೇ ಆವರಿಸಿತು...

Saturday, April 7, 2012

ಸುಖ..


ಆ ಬ್ರಹ್ಮ ನನ್ನನ್ನು
ನಿನ್ನ ಕಣ್ಣ
ಹನಿಯನ್ನಾಗಿಯಾದರೂ
ಹುಟ್ಟಿಸಬಾರದಿತ್ತಾ ಗೆಳೆಯssss
ನಿನ್ನ ಮಡಿಲಿಗೆ ಬಿದ್ದಾಗ
ಸಾಯುವುದೂ
ಎಷ್ಟು ಸುಖ ಎನಿಸುತಿತ್ತು...

Friday, April 6, 2012

ತಾಯ ಮಡಿಲು..

ತಾಯೆ ನಿನ್ನ ಮಡಿಲ ಸುಖವ
ಹೇಗೆ ನಾನು ಬಣ್ಣಿಸಲಿ,
ನೀನು ಕೊಟ್ಟ ಪ್ರೀತಿ ತುತ್ತ
ಹೇಗೆ ನಾನು ಮರೆಯಲಿ?

ನಿನ್ನ ಬೆಚ್ಚಗಿನ ಅಪ್ಪುಗೆಯಲ್ಲೆ
ಎಷ್ಟು ದಿನ ನನ್ನ ಬಂಧಿಸಿಡುವೆ
ಕ್ರೂರ ಜಗಕೆ ನನ್ನ ಪರಿಚಯಿಸಿ
ಒಂಟಿಯಾಗಿ ಬಿಡಲು ಭಯವೆ||

ತಾಯೆ ನಿನ್ನ ಮಡಿಲಿನಲ್ಲಿ
ಪರಮ ಸುಖಿ ನಾನು
ಪ್ರತಿ ಜನ್ಮದಲ್ಲೂ ಮಗುವಾಗಿ ಹುಟ್ಟಿ
ನಿನ್ನ ಮಡಿಲನೆ ಅಪ್ಪುವೆನು||
ಅಗಲದಿರು..

ತಿರುಗಿ ನೋಡದಿರು ಮರಳಿ ನನ್ನೆಡೆಗೆ
ಅಗಲಲಾರವು ನಿನ್ನ, ಕಂಗಳು
ಬೆರಳ ತೋರುತಿದೆ ಮನವು ನಿನ್ನೆಡೆಗೆ
ಅಡಗಲಾರವು ಕಣ್ಣ ಹನಿಗಳು||

ಕಡೆದೆ ಕಲ್ಮನವ ಬಿಡದೆ ನೀ
ನಿನಗೆ ನಾ ನೀಡಿದುದೆಂತು?
ಮುಡಿದೆ ಈ ಹೂವ ನೀ
ಮುದುಡಿ ನಾ ಕೂರುವುದೆಂತು?

ಮೆರೆದು ಮಿನುಗಿತು ನನ್ನ ಬಾಳು
ಜೊತೆಯಾಗಿ ನೀನಿರಲು,
ತೊರೆವೆ ಯಾಕೆ ಕೇಳದೆ ಗೋಳು
ಮನ ಬರದೆ ಜೊತೆ ಇರಲು||

                  - ಮೇಘನಾ ಭಟ್ಟ
ನಿನ್ನಲ್ಲೆ ಬಂಧಿಸು...

ನಲ್ಲ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನಂತೆ
ಮಿಡುಕಾಡುತಿರುವೆ ನಾನು||


ಅಳತೆ ಮೀರಿದ ಪ್ರೀತಿ ತೋರಿ
ದಿಗಿಲೆ ಇರದ ಮಮತೆ ಬೀರಿ
ಮೂಕಳಾಗಿಸಿದೆ ನನ್ನ,
ನಿನ್ನ ಎದೆಯ ಗೂಡಲ್ಲಿ ಬೆಚ್ಚಗೆ
ಅಡಗಿ ಕುಳಿತೆನು ನಾ
ದೂಡದಿರು ಹೊರಗೆ ನನ್ನ||

ನಿನ್ನ ಕೊಳದಂತ ಕಂಗಳಲಿ
ಆಗಸದಷ್ಟು ಭರವಸೆ ತುಂಬಿ
ಬಂದಿಸಿದೆ ನನ್ನ,
ಕೋಪ ಆವೇಶದಲ್ಲೂ
ಕಣ್ಣೀರ ರೂಪದಲ್ಲೂ
ನೂಕದಿರು ಹೊರಗೆ ನನ್ನ||

            - ಮೇಘನಾ ಭಟ್ಟ

Thursday, April 5, 2012

ಕರಗಿ ಹೋದೆನು ನಾ
ಅರಿಯುವ ಮೊದಲೆ
ಕರೆದ ಕರವದು
ಉರಿವ ಕಿಚ್ಚೆಂದು||

... ಚಾಚಿದ ಕರವದು
ಇರಿದಿಹುದು ಉದರವನು
ಮಾರ್ದನಿಸುವ ಕರೆಗೆ
ಬೆಲೆ ತೆರದೆ||

ಕೊರಗಿ ಕೂಗುತಿದೆ
ಎನ್ನೊಡಲ ಗಾಯವದು
ಎರಗಿ ಬರದಿರು ಮತ್ತೆ
ನನ್ನ ಕಡೆಗೆ||

ರಚನೆ:- ಮೇಘನಾ ಭಟ್ಟ
 
ನಿನ್ನ ನಗುವಲ್ಲೆ ಅಳಿಯಲೆ..

ಹನಿಗಣ್ಣ ಮೊಗದಲ್ಲಿ
ಹೂ ನಗೆಯ ಮೂಡಿಸಲು
ಬೆಳದಿಂಗಲೊಡಲನ್ನು
... ಕದ್ದು ತರಲೆ ಗೆಳತಿ||

ನೀಲ ಮೇಘಗಳ ಹೊಲಿದು
ಅಂಗಿಯ ಮಾಡಿ
ಕೆಂದಾರೆಗಳ ಸುರಿದು
ಹಾರವ ಮಾಡಿ
ನನ್ನೆದೆಯ ದೇವತೆ
ನಿನಗರ್ಪಿಸಲೆ ಗೆಳತಿ||

ಸಿಹಿ ಸೋನೆ ಹನಿಗಳ
ಗಾನದ ನಾದದಲಿ
ನನ್ನ ಧಮನಿ ನೆತ್ತರನು
ಹರಿಯ ಬಿಡಲೆ ಗೆಳತಿ
ಆ ನಿನ್ನ ನಗುವಲ್ಲೆ
ಅಳಿದು ಬಿಡಲೆ||
ರಚನೆ-ಮೇಘನಾ ಭಟ್ಟ
ಓ ನೆನಪೇ..

ಬಂದೆ ಯಾಕೆ ನನ್ನ ಹಿಂದೆ
ಬಿಡದೆ ಕಾಡುವ ನೆನಪೆ,
ಕೊರಳ ತಬ್ಬಿ ಹಿಡಿದೆ ಉಸಿರ
... ನಿನ್ನ ಎದುರಿಸಲಾಗದೆ||

ಮರೆತೆ ಮನದ ಕರೆಯನು
ನಿನ್ನ ಕ್ರೂರ ಕುಣಿತಕೆ,
ತೊರೆದೆ ಎಲ್ಲ ಬಂಧಗಳನು
ನಿನ್ನ ಈ ಮೆರೆದಾಟಕೆ||

ನೀ ಒಮ್ಮೆ ಬರಲೆದುರು
ನನ್ನೊಡಲಿನಾ ಉಸಿರು,
ತಾ ಕರಗಿ ಕಣ್ಣೀರಾಗಿ
ಹರಿದಿಹುದು ಮಡಿಲಿಗೆ||

ಕಳೆದ ಕ್ಷಣವದು ಮರಳಿ ಬರದು
ನನ್ನ ಬೇಗೆಯ ತಣಿಸಲು,
ಕಣ್ಣ ಕಾಂತಿಯ ಮರಳಿಸಿ
ಸಿಹಿಯ ಭೋಜನ ಉಣಿಸಲು||

ದೂರಾಗು ಓ ನೆನಪೆ
ಮರಳಿ ಬಾರದಿರು,
ಈ ನೊಂದ ಮನವನ್ನು
ಕೆರಳಿ ಕಾಡದಿರು||

ರಚನೆ- ಮೇಘನಾ ಭಟ್ಟ
ನೆಲೆಯಾಗು ಶಿಲೆಗೆ

ಮನದ ಮಲ್ಲಿಗೆಯಾಗು
ಕರಗದಿರು ಕನಸಿನಲಿ
ಬಾಡದಿರು ಪ್ರಿಯೆ ನನ್ನ
... ಒಲವ ಬಂಧನದಿ,

ಕರಗಿ ಮಳೆಹನಿಯಾಗು
ಕೊರಗದಿರು ಬೇಗೆಯಲಿ
ಬೇಯದಿರು ಪ್ರಿಯೆ ನನ್ನ
ಒಲವ ಬಿಸಿಲಿನಲಿ,

ಹರಿದು ನೀ ನದಿಯಾಗು
ಮರುಗದಿರು ನಿಂತಲ್ಲಿ
ತೋಯದಿರು ಪ್ರಿಯೆ ನನ್ನ
ಒಲವ ಪ್ರವಾಹದಲಿ,

ತಂಪು ತಂಗಾಳಿಯಾಗು
ನಿಲ್ಲದಿರು ಮರೆಯಲ್ಲಿ
ತೂರದಿರು ಪ್ರಿಯೆ ನನ್ನ
ಒಲವ ಗಾಳಿಯಲಿ,

ಬೆಳಗಿ ನೀ ದೀಪವಾಗು
ಸರಿಯದಿರು ಇರುಳಲ್ಲಿ
ದೂಡದಿರು ಪ್ರಿಯೆ ನನ್ನ
ಒಲವ ಕತ್ತಲಲ್ಲಿ,

ಹಬ್ಬಿ ನೀ ಹಸಿರಾಗು
ಕೊಳೆಯದಿರು ಮನದಲ್ಲಿ
ತೊರೆಯದಿರು ಪ್ರಿಯೆ ನನ್ನ
ಒಲವೆಂಬ ತರುವ,

ನಿನ್ನ ಒಲವೊಂದೆ
ಚೇತನವು ಬಾಳಿನಲಿ
ನೀನೆ ನೆಲೆಯಾಗು
ಈ ಶಿಲೆಗೆ||

ರಚನೆ- ಮೇಘನಾ ಭಟ್ಟ