Thursday, April 5, 2012

ನೆಲೆಯಾಗು ಶಿಲೆಗೆ

ಮನದ ಮಲ್ಲಿಗೆಯಾಗು
ಕರಗದಿರು ಕನಸಿನಲಿ
ಬಾಡದಿರು ಪ್ರಿಯೆ ನನ್ನ
... ಒಲವ ಬಂಧನದಿ,

ಕರಗಿ ಮಳೆಹನಿಯಾಗು
ಕೊರಗದಿರು ಬೇಗೆಯಲಿ
ಬೇಯದಿರು ಪ್ರಿಯೆ ನನ್ನ
ಒಲವ ಬಿಸಿಲಿನಲಿ,

ಹರಿದು ನೀ ನದಿಯಾಗು
ಮರುಗದಿರು ನಿಂತಲ್ಲಿ
ತೋಯದಿರು ಪ್ರಿಯೆ ನನ್ನ
ಒಲವ ಪ್ರವಾಹದಲಿ,

ತಂಪು ತಂಗಾಳಿಯಾಗು
ನಿಲ್ಲದಿರು ಮರೆಯಲ್ಲಿ
ತೂರದಿರು ಪ್ರಿಯೆ ನನ್ನ
ಒಲವ ಗಾಳಿಯಲಿ,

ಬೆಳಗಿ ನೀ ದೀಪವಾಗು
ಸರಿಯದಿರು ಇರುಳಲ್ಲಿ
ದೂಡದಿರು ಪ್ರಿಯೆ ನನ್ನ
ಒಲವ ಕತ್ತಲಲ್ಲಿ,

ಹಬ್ಬಿ ನೀ ಹಸಿರಾಗು
ಕೊಳೆಯದಿರು ಮನದಲ್ಲಿ
ತೊರೆಯದಿರು ಪ್ರಿಯೆ ನನ್ನ
ಒಲವೆಂಬ ತರುವ,

ನಿನ್ನ ಒಲವೊಂದೆ
ಚೇತನವು ಬಾಳಿನಲಿ
ನೀನೆ ನೆಲೆಯಾಗು
ಈ ಶಿಲೆಗೆ||

ರಚನೆ- ಮೇಘನಾ ಭಟ್ಟ

No comments:

Post a Comment